ಅಪೋಹವಾದ
	ಶಬ್ದ ಅಥವಾ ಪದದ ಅರ್ಥನಿರ್ಣಯಕ್ಕೆ ಸಂಬಂಧಿಸಿದ ವಿಚಾರಪರಂಪರೆಯಲ್ಲಿ ಬೌದ್ಧತಾರ್ಕಿಕರು ಹಿಡಿದಿರುವ ವಿಶಿಷ್ಟಮಾರ್ಗವನ್ನು ಈ ಹೆಸರಿನಿಂದ ಕರೆಯಲಾಗಿದೆ. ಭಾರತದ ದರ್ಶನಗಳಲ್ಲಿ ಈ ವಿಷಯವನ್ನು ಕುರಿತು ಅನೇಕ ಮೀಮಾಂಸೆಗಳು ಹುಟ್ಟಿವೆ. ಪ್ರಾಚೀನ ನಿರುಕ್ತ ಮತ್ತು ವ್ಯಾಕರಣದಲ್ಲಿ ಮೂಲತಃ ಶಬ್ದಗಳು ಕ್ರಿಯಾಬೋಧಕಗಳು ಎಂಬ ಅಭಿಪ್ರಾಯವಿದೆ. ಅನಂತರ ಮೀಮಾಂಸಕರು ಶಬ್ದ ಸಿದ್ಧವಸ್ತುವನ್ನು ಬೋಧಿಸುವುದಿಲ್ಲ; ಸಾಧಿಸಬೇಕಾದ ಕಾರ್ಯವನ್ನು ಬೋಧಿಸುತ್ತದೆ ಎಂದು ವಾದಮಾಡಿದ್ದಾರೆ. ನ್ಯಾಯವೈಶೇಷಿಕ ಮತ್ತು ವೇದಾಂತ ದರ್ಶನಗಳಲ್ಲಿ ಶಬ್ದಕ್ಕೆ ಪರಿನಿಷ್ಪನ್ನ ಅಥವಾ ಸಿದ್ಧವಾದ ಪದಾರ್ಥವೇ ಅರ್ಥವೆಂದು ತೀರ್ಮಾನಿಸಲಾಗಿದೆ.

	ಬೌದ್ಧತಾರ್ಕಿಕರ ರೀತ್ಯ ಅಪೋಹವೆಂದರೆ ನಿಷೇಧ ಅಥವಾ ನಿರಾಕರಣೆ ಅಥವಾ ವ್ಯಾವೃತ್ತಿ ಎಂದು ಅರ್ಥ. ತಾನು ಬೋಧಿಸುವ ಪದಾರ್ಥ ಇತರ ಪದಾರ್ಥಗಳಿಂದ ಭಿನ್ನವೆಂದು ಹೇಳುವುದೇ ಪ್ರತಿಯೊಂದು ಶಬ್ದದ ಉದ್ದೇಶ. ಒಂದು ವಸ್ತು ಹೇಗಿದೆ ಎನ್ನುವುದಕ್ಕಿಂತ ಹೇಗಿಲ್ಲ ಎಂದು ಹೇಳುವುದೇ ವಾಗ್ ವ್ಯವಹಾರದ ಪ್ರಯೋಜನವೆಂದು ಈ ವಾದದ ಸಾರ. ಇದರ ಪ್ರಕಾರ ಶಬ್ದಾರ್ಥ ಭಾವಾತ್ಮಕವಲ್ಲ, ಅಭಾವಾತ್ಮಕ.						
(ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ